ಅರಿಯದೇ ಬರುವ ಮನದ ಪದಗಳ ಸಾಲೇ ಈ ಕಾವ್ಯ

ಡಿಸೆಂಬರ್ 7, 2012

ವಿಳಾಸವಿಲ್ಲದ – ಪ್ರೀತಿ

Filed under: ಅರಿಯದೇ ಬಂದದ್ದು — kavya gowda @ 4:34 ಅಪರಾಹ್ನ
Tags:
 
ಒಂದಲ್ಲ ಎರಡಲ್ಲ
ಲೆಕ್ಕವಿಲ್ಲದಷ್ಟು ಪತ್ರಗಳ
ಬರೆದದ್ದು
ವಿಪರ್ಯಾಸವೆಂದರೆ
ಕಳಿಸಲು ನಿನ್ನ
ವಿಳಾಸವಿಲ್ಲದ್ದು…
ಓದಬೇಕಿತ್ತು ನೀನೊಮ್ಮೆ
ಅವುಗಳನು
ಅರಿಯಬಹುದಿತ್ತೇನೋ
ನನ್ನ ನಿಷ್ಕಲ್ಮಶವಾದ
ಪ್ರೀತಿಯನ್ನು.
ಬೇಸರವಿಲ್ಲ ನೀ
ಓದಲಿಲ್ಲವೆಂದು
ಭರವಸೆಯು ನನಗಿರಲಿಲ್ಲ
ನೀ ಅರಿಯುವೆಯೆಂದು,
ಆದರೂ ನಿರೀಕ್ಷೆಯಿತ್ತು
ಒಂದಹನಿಯ ಕಣ್ಣೀರು.
”ಎಲ್ಲಿರುವೆ ? ಹೇಗಿರುವೆ ?
ಎಂಬುದಿರಲಿಲ್ಲ
ಕನಸಿತ್ತು, ನಗುವಿತ್ತು
ನಿನ್ನೊಂದಿಗಿನ ಮುಂದಿನ
ಕ್ಷಣವಿತ್ತು , ನಾಳೆಯಿತ್ತು.”
ನಾ ಕಳಿಸಲಾರೆ, ನೀ ಓದಲಾರೆ
ಹರಿದುಬಿಡಲೇ ,,?-
ನನಸಾಗದ ಈ ಕನಸುಗಳ
ಪತ್ರಗಳನ್ನ ,
ಮರೆತುಬಿಡಲೇ
ವಿಳಾಸವಿಲ್ಲದ ನನ್ನೊಳಗಿನ
”ನಿನ್ನ- ಪ್ರೀತಿಯನ್ನ ”.
Advertisements

ಡಿಸೆಂಬರ್ 1, 2012

ನೆನಪು

Filed under: ಅರಿಯದೇ ಬಂದದ್ದು — kavya gowda @ 6:07 ಅಪರಾಹ್ನ
Tags:

ಹುಚ್ಚನಂತೆ ಪ್ರೀತಿಸಿದವನ
ಪ್ರೀತಿಗೆ ಮೋಸ ಮಾಡಿ
ಹೋದವಳ ಕೆಲವು ದಿನದ
ನಿಜವಾದ ಪ್ರೀತಿಯ
ನೆನಪು ಮರೆಯದಿರುವುದೇ ..!!?

”ಆಲಿಸ ಬೇಕೆನಿಸುತಿದೆ ನಿನ್ನ
ಹೃದಯದ ಬಡಿತವ,
ಕೇಳಬೇಕೆನಿಸುತಿದೆ ಒಂದುಸಲ
ನನ್ನೆಸರ ನಿನ್ನ ದ್ವನಿಯಲೀ….,
ನೋಡಬೇಕೆನಿಸಿದೆ ನನಗಾಗಿ
ಹುಡುಕುತಿದ್ದ ನಿನ್ನ ಕಣ್ಣುಗಳ,
ಬಯಸುತಿದೆ ಮನಸು ನಿನ್ನ
ಮರೆಯಲಾಗದ ಅಪ್ಪುಗೆಯ…
ಹೇಗೆ ಹೇಳಲಿ ನಿನಗೆ
ವಂಚಿಸಿ ಹೋದವಳು ನಾನು.

ನನ್ನ ನಿಟ್ಟುಸಿರು
ಗಾಳಿಯಲಿ ತೇಲಿಬಂದು
ನಿನ್ನ ಮುಂಗುರುಳ ಸರಿಸಿ
ಒಂದು ಕ್ಷಣ ನನ್ನ ನೆನಪಿಸಬಾರದೇ..?

”ತಪ್ಪು ನನ್ನದೇ , ಕ್ಷಮೆ ಇಲ್ಲದ್ದು.
ನೋವು ನನಗೆ
ಮರಳಿ ನಿನ್ನಲ್ಲಿ ಬರಲಾಗದ್ದು.
ಕೊನೆಯಿಲ್ಲ ಇದಕ್ಕೆ , ಪರಿಸ್ತಿತಿ ವಿಧಿಯದ್ದು”.
ಇಷ್ಟವಿಲ್ಲದ ಜೀವನಕೆ
ಕೊನೆಯೆಂಬ ನಿದ್ರೆಯು
ಬರುವವರೆಗೆ ಕಾಯಬೇಕಿದೆ
ನಿನ್ನ ನೆನಪಿನಲೇ.

ಆಗಷ್ಟ್ 18, 2009

ಕಲ್ಪನೆ

Filed under: ಅರಿಯದೇ ಬಂದದ್ದು — kavya gowda @ 11:05 ಫೂರ್ವಾಹ್ನ
Tags:

ಹಕ್ಕಿಯಂತೆ ಹಾರುತಿರುವೆ
ಮೇಲಕ್ಕಲ್ಲ ಕೆಳಕ್ಕೆ
ಕತ್ತಲು ಆವರಿಸಿರುವುದಾದರೂ
ಅರಿವಾಗುತಿದೆ
ಪಾತಾಳದೊಳಗೆ ಬೀಳುವಿಕೆ.
ಮೇಲೆ ಮೇಲೆ ಹಾರುವ
ಪ್ರಯತ್ನ ನನ್ನದಾದರೂ
ಸಾಧ್ಯವಾಗದ
ಅಸಹಾಯಕತೆ.
ಕೂಗಿದ್ದೂ ಉಂಟು
ಆದರದು ಕೇಳಿಸಿದ್ದು
ಯಾರಿಗಿಲ್ಲ,ಬದಲಿಗೆ
ಪ್ರತಿಧ್ವನಿಯಾಗಿ
ಅಪ್ಪಳಿಸಿದ್ದು ನನ್ನ ಕಿವಿಗೆ.
ನಿಲ್ಲಲು ನೆಲೆ ಬೇಕಿತ್ತು
ಹುಡುಕಾಟದಲಿ ಸಿಗದೆ
ಮನಸ್ಸಿಗಾದದ್ದು ನಿರಾಸೆ
ಆದರೂ, ಬಿಡದ ಆಶಾವಾದಿತ್ವ
ಕೊನೆಯಿಲ್ಲದ ಮೊದಲಿಲ್ಲ
ಸಿಕ್ಕೇ ಸಿಕ್ಕಿತೆಂಬ ಛಲ.
ಬೇಕಾಗಿದ್ದು ಗಟ್ಟಿ ಹೃದಯ
ಜೊತೆಗಿದ್ದದ್ದು ಧೈರ್ಯ
ಆದರೂ, ಕಣ್ಣಲ್ಲಿದ್ದದ್ದು ನೀರು
ಯಾರಿಗೆ ಕಾಣಿಸೀತು
ಕೆನ್ನೆಗಳ ಮೇಲಿಂದ ಜಾರಿ
ಎಲ್ಲೋ ಬಿದ್ದು ಮರೆಯಾಗಿತ್ತು.
ಹಸಿದ ಹೊಟ್ಟೆಯಾದರೂ
ಕೋಪಕ್ಕೇನೂ ಕಮ್ಮಿಯಿಲ್ಲ
ಕೂಗಾಡಿಬಿಡಬೇಕು
ಕೇಳಲು ಯಾರಿರುವರಲ್ಲಿ
ಉಸಿರಿಗೂ ಮೌನ
ಜೊತೆಗಾರರಿಲ್ಲದ ಒಂಟಿ.
ಎಲ್ಲೂ ನಿಲ್ಲದೇ

ಕೊನೆಯನೂ ತಿಳಿಯದೆ

ಸಾಗುತಿದೆ ಪಯಣ.

ಕ್ಷಣದಲೇ

ಮರಳುಗಾಡಿನಲಿ ಸಿಕ್ಕ
ಗುಟುಕು ನೀರಿನ ಅನುಭವ
ಏನೋ ಸಂತಸ
ಹೊಸತೊಂದು ಅನುಭವ
ಎಂದೂ ಮರೆಯಲಾಗದ ಸ್ಪರ್ಶ
ಕೊನೆಯವರೆಗೂ
ಜೊತೆಗಿರುವೆನೆಂಬ ಭರವಸೆ
ಮನಸು ಕುಣಿದು ಕುಪ್ಪಳಿಸಿತ್ತು
ಮುಚ್ಚಿದ ಕಣ್ಣು ತೆರೆದೆ
ಎದುರಲ್ಲಿ ನೀನು
ಪ್ರಶ್ನೆಯ ಗೆರೆಗಳಿಂದ
ತುಂಬಿರುವ ನಿನ್ನ ಮುಖ
ನೆನಪಿಸಿದ್ದು
ನಾ ಕಂಡ ಕಲ್ಪನೆಯ
ಲೋಕವನ್ನ.

ಜನವರಿ 12, 2009

ಬೇಸರ

Filed under: ಅರಿಯದೇ ಬಂದದ್ದು — kavya gowda @ 1:20 ಅಪರಾಹ್ನ
Tags:

ಕನಸಿನಲಿ ಬಂದ ರಾಜಕುಮಾರ 

ಬಂದಿರಲು ಸನಿಹ ಬೆಚ್ಚಿ ಬೆದರಿ

ನೋಡಿದ್ದೆ ಕುತೂಹಲದಲಿ

ನನ್ನ ಆತಂಕವನರಿತರೂ

ನನ್ನನುಮತಿಯನೂ ಕೇಳದೇ

ಮುಂಗುರುಳ ಸರಿಸಿ

ಚುಂಭಿಸಿದ್ದ ತುಟಿಗಳಿಗೆ

ರೂಪದಲಿ ಮನ್ಮಥನವ

ರತಿಯಾಗಿದ್ದೆ ನಾ ಕೆಲ ಸಮಯ

ನನ್ನನಾನೇ ಮರೆತು

ಬಿಟ್ಟ ಕಂಗಳ ಮುಚ್ಚದೆ

ನೋಡಿದ್ದೆ ಅವನಂದವ

ನನಗರಿವ ಕೊಡದೇ

ಸೋತಿತ್ತು ಮನ ಅವನಿಗೆ.

 ಒಮ್ಮೆ ಅವನೆದೆಗೆಒರಗಿ

ಹೃದಯ ಬಡಿತವ ಕೇಳುವಾಸೆ

ನನ್ನ ಮನದ ಮಾತ

ಅರಿತವನಂತೆ ಬರಸೆಳೆದು
ಬಾಹುವಿನಲಿ  ಅಪ್ಪಿ

ಮುತ್ತನಿತ್ತಿದ್ದ ಹಣೆಗೆ

ಎಂತಹ ರಸಿಕ ,ಮನಸೋತು

ಒರಗಿದ್ದೆ ಅವನೆದೆಗೆ

ಅವನೆದೆಯ ಬಿಸಿ ಉಸಿರ

ಡವಡವದಲಿ ನನ್ನೆದೆಯ ಬಡಿತ

ಜೋರಾಗುತಿರಲು

ಮನ ಎಚ್ಚರಿಸಿ ಬುದ್ಡಿ ಹೇಳಿ

ಬಿಡಿಸಿಕೊಳ್ಳ ಹೊರಟವಳಾ

ಕಿವಿಯಲ್ಲಿ ಪಿಸುರಿದ್ದ

ಹೋಗದಿರು ನಲ್ಲೇ ನನ್ನಿಂದ ದೂರ

ಪ್ರೀತಿಸಿರುವೆ ನಾನಿನ್ನ ಮನಸಿನಲೆ.

 ಮನಸಾರೆ ಮುದ್ದಿಸಿದೆ 

ಹೃದಯದಲೆ ಪೂಜಿಸಿದೆ

ಪ್ರೀತಿಸಿದೆ ,ಪ್ರೇಮಿಸಿದೆ

ಅವನಿಲ್ಲದೇ ನಾನಿಲ್ಲವಾಗಿ

ನನ್ನೇ ನಾ ಮರೆತಿರಲು

ಕಾಣದೆ ಮರೆಯಾಗಿದ್ದ
ಹೇಳದೇ ಕೇಳದೇ.

ಹುಡುಕಿದೆ

ದಮಯಂತಿ  ಮರೆಯಾದ ನಳನ ಹುಡುಕಿದಂತೆ,

ಕೂಗಿದೆ

ಗಂಟಲು ಕಿತ್ತು ಬರುವವರೆಗೆ,

ರೋಧಿಸಿದೆ

ಹೃದಯ ಬಡಿತ ನಿಲ್ಲಿಸುವಂತೆ

ಅತ್ತಿದ್ದೆ ಕಣ್ಣಲ್ಲಿ  ರಕ್ತ ಸೋರುವಂತೆ.

 
ಬೇಸರ ಗೊಂಡಿತ್ತು ಮನಸು

ಬಾರವಾಗಿತ್ತು ಹೃದಯ

ಸೂರ್ಯನ ಕಿರಣದ ಬೆಳಕು ಮೊಗವ

ತಗುಲಿ ಕನಸ ಎಚ್ಚರಿಸಿದರೂ

ಅಳುತಲೆ ಇದ್ದೇ ಮರೆಯಾದ

ರಾಜಕುಮಾರನ ನೆನಪಿನಲೆ.

ಜನವರಿ 3, 2009

ಅಸಾಧ್ಯ ಪ್ರಯತ್ನ

Filed under: ಅರಿಯದೇ ಬಂದದ್ದು — kavya gowda @ 11:20 ಫೂರ್ವಾಹ್ನ
Tags:

ಗಡಿಯಾರದ ಮುಳ್ಳುಗಳು
ತಿರುಗುತಿವೆ
ಚಕ್ರದಂತೆ
ಸಮಯಕ್ಕೆ ಇಲ್ಲ
ಕೊನೆಯೆಂಬ ನಿಲ್ದಾಣ.
ಪ್ರಯತ್ನಿಸುತಿರುವೆ
ಕಟ್ಟಿ ಹಾಕಬೇಕೆಂದು
 ದಿನವ
ಜಂಬದಲಿ ಅಡ್ಡ ಬರುತಿಹುದು
ನನ್ನನ್ನೇ ಅಣಕಿಸಿ ನಾಳೆ.
ಏನ ಮಾಡಿದೆ ನಿನ್ನೆ
ಏನ ಮಾಡಲಿ ನಾಳೆ
ಎನ್ನುವುದರಲೇ
ದಿನವು
ಮುಗಿದು ಬಂದು ನಿಲ್ಲುವುದು
ಮಗದೊಂದು ದಿನವು
ದಿನಕದು ನಾಳೆಯು.
ಇಂದು ಗಳಿಸುವುದು
ನಾಳೆಗಾಗಿಯಾದರೆ
ನಾಳೆಯಲಿ ಗಳಿಸುವುದು
ಅಂದಿಗಾಗಿ ಅಲ್ಲಾ
ಮಗದೊಂದು ನಾಳೆಗಾಗಿ.
ದಿನದಿನವು ಓಡುತಿರಲು
ತಿರುಗಿ ನೋಡದೇ
ನಿನ್ನೆ ಇಂದನು
ಹಗ್ಗ ಬಿಚ್ಚಿ ಹುಚ್ಚು
ಕುದುರೆಯ ಹಿಡಿಯುವಂತೆ
ಸಾಧ್ಯವಿಲ್ಲದ ಅಸಾಧ್ಯ
ಕಾಲವನು ಕಟ್ಟಿಹಾಕುವ
ನನ್ನ ಪ್ರಯತ್ನ.

ಡಿಸೆಂಬರ್ 29, 2008

ನನ್ನ ನಲ್ಲ

Filed under: ಅರಿಯದೇ ಬಂದದ್ದು — kavya gowda @ 9:58 ಫೂರ್ವಾಹ್ನ
Tags:

ನನ್ನ ನಿದ್ರೆಯೆಲ್ಲ
ಅವನಿಗೆ ಮೀಸಲೆಂಬಂತೆ
ನಾ ಕಣ್ಣು ಮುಚ್ಚಿದೊಡನೆಯೇ
ಚೋರನಂತೆ ಬಂದು
ಹಿಂದೆ ಮುಂದೆ
ಸುತ್ತ ಮುತ್ತಾ
ಬಿಡದೆ ತಿರುಗುತಿದ್ದವನಿಗೆ
ಹುಚ್ಚಿವನಿಗೆಂದು ಬೈದರೂ
ಕೇಳದವನಂತೆ ನಟಿಸುತಿದ್ದವ,
ಎದುರು ಬಂದರೆ
ಬಿಟ್ಟ ಕಣ್ಣ ಮುಚ್ಚದೆ
ಇನ್ನೇನು  ನನ್ನ
ನುಂಗಿ ಬಿಡುವಂತೆ ನೋಡಿ
ನಾನು ನಾಚಿ 
ಕರಗುವಂತೆ ಮಾಡುತಿದ್ದವ,
ಸನಿಹ ಬಂದು
ತೋಳಲಿ ನನ್ನ ಬಳಸಿ
ಹಣೆಗೆ ಮುತ್ತನಿತ್ತು 
ಮುದ್ದಿಸಿ ಪ್ರೀತಿಸುತಿದ್ದವ
ನಾ ಕಣ್ಣ ಬಿಟ್ಟವೊಡನೆ
ಬೇಸರಗೊಂಡವನಂತೆ
ಹಗಲಿನಲಿ ನೀ ನನ್ನವಳಲ್ಲ
ಮತ್ತೆ ರಾತ್ರಿ ಬರುವೆನೆಂದು
ಮರೆಯಾಗಿ ಹೋದ
ನನ್ನ  ನಲ್ಲ
ನನ್ನ ಕನಸ ರಾಜಕುಮಾರ

ಡಿಸೆಂಬರ್ 20, 2008

ಜೀವನ

Filed under: ಅರಿಯದೇ ಬಂದದ್ದು — kavya gowda @ 12:36 ಅಪರಾಹ್ನ
Tags:

ಚರ್ಮದ ಗೋಡೆಯೊಳಗೆ
ರಕ್ತದ ಸರೋವರದಲಿ
ನರ ನಾಡಿಗಳ ಬೇರಿನಲಿ
ಚಿಕ್ಕದಾದ ಮಾಂಸ
ಮುದ್ದೆಯಿಂದ
ಆಕೃತಿಯೊಂದು
ಆಕಾರಗೊಂಡು
ನವ ಮಾಸದವರೆಗೆ
ಬದುಕ ಮಾಡುತಿರಲು
ಬೆಳೆದ ಬೆಳವಣಿಗೆಗೆ
ಜಾಗ ಸಾಲದೇ
ಉಸಿರು ಕಟ್ಟುತಿರಲು
ಗಾಳಿ ಬೆಳಕುಗಳ
ಪ್ರಪಂಚಕ್ಕೆ, ನಾ
ಬಯಸದೇ ಹೊರಬಂದು
ನಿನ್ನೆ , ಇಂದು , ನಾಳೆಗಳನು
ಲೆಕ್ಕ ಹಾಕುತ್ತಾ
ಬಾಲ್ಯ , ಯೌವನ
ಮುಪ್ಪುಗಳ ಹಾದಿಯಲಿ
ಬೇಕು ಬೇಡಗಳ ನಡುವೆ
ಹೆಜ್ಜೆ ಇಡುತಿರಲು
ಬದುಕು ಸಾಕೆನಿಸಿದಾಗ
ಉಸಿರು ನಿಂತು
ಮಣ್ಣಿನಲಿ ಮರೆಯಾಗುವುದು
ನಮ್ಮದಲ್ಲದ ನಮ್ಮ ಜೀವ.

ಜುಲೈ 17, 2008

ಕನಸು

Filed under: ಅರಿಯದೇ ಬಂದದ್ದು — kavya gowda @ 9:08 ಫೂರ್ವಾಹ್ನ
Tags:
————-
ಚಿಂತೆಯಲ್ಲಿರುವ ಜೀವಕ್ಕೆ
ಚಿಂತೆಗಳ ಹೆಚ್ಚಿಸಿ
ಪ್ರೀತಿಸುವವರ ಪ್ರೀತಿಯನು
ಅವರಿಗರಿಯದೆ ನೋಯಿಸಿ
ದಣಿದ ಜೀವಗಳು
ಬೆಚ್ಚಿ ಹೆದರುವಂತೆ ಮಾಡಿ
ನಮಗರಿಯದೆ ನಮ್ಮ ನಗಿಸಿ
ಅಳುವಂತೆ ಮಾಡಿ ಹಿಂಸಿಸಿ
ಏನಾಯ್ತೆಂದು ಅರಿಯುವುದರೊಳಗೆ 
ಮಿಂಚಿನಂತೆ ಮರೆಯಾಗಿ 
ಯೋಚಿಸುವಂತೆ ಮಾಡಿ 
ಏನನೋ  ಗೆದ್ದ  ಹೆಮ್ಮೆಯಲಿ
ತಾನು ಸಂತಸವಾಗಿ
ನಾಳೆ ಮತ್ತೆ ಬರುವೆ ಎನ್ನುವವಳು .
———————  

Blog at WordPress.com.