ಅರಿಯದೇ ಬರುವ ಮನದ ಪದಗಳ ಸಾಲೇ ಈ ಕಾವ್ಯ

ಜನವರಿ 12, 2009

ಬೇಸರ

Filed under: ಅರಿಯದೇ ಬಂದದ್ದು — kavya gowda @ 1:20 ಅಪರಾಹ್ನ
Tags:

ಕನಸಿನಲಿ ಬಂದ ರಾಜಕುಮಾರ 

ಬಂದಿರಲು ಸನಿಹ ಬೆಚ್ಚಿ ಬೆದರಿ

ನೋಡಿದ್ದೆ ಕುತೂಹಲದಲಿ

ನನ್ನ ಆತಂಕವನರಿತರೂ

ನನ್ನನುಮತಿಯನೂ ಕೇಳದೇ

ಮುಂಗುರುಳ ಸರಿಸಿ

ಚುಂಭಿಸಿದ್ದ ತುಟಿಗಳಿಗೆ

ರೂಪದಲಿ ಮನ್ಮಥನವ

ರತಿಯಾಗಿದ್ದೆ ನಾ ಕೆಲ ಸಮಯ

ನನ್ನನಾನೇ ಮರೆತು

ಬಿಟ್ಟ ಕಂಗಳ ಮುಚ್ಚದೆ

ನೋಡಿದ್ದೆ ಅವನಂದವ

ನನಗರಿವ ಕೊಡದೇ

ಸೋತಿತ್ತು ಮನ ಅವನಿಗೆ.

 ಒಮ್ಮೆ ಅವನೆದೆಗೆಒರಗಿ

ಹೃದಯ ಬಡಿತವ ಕೇಳುವಾಸೆ

ನನ್ನ ಮನದ ಮಾತ

ಅರಿತವನಂತೆ ಬರಸೆಳೆದು
ಬಾಹುವಿನಲಿ  ಅಪ್ಪಿ

ಮುತ್ತನಿತ್ತಿದ್ದ ಹಣೆಗೆ

ಎಂತಹ ರಸಿಕ ,ಮನಸೋತು

ಒರಗಿದ್ದೆ ಅವನೆದೆಗೆ

ಅವನೆದೆಯ ಬಿಸಿ ಉಸಿರ

ಡವಡವದಲಿ ನನ್ನೆದೆಯ ಬಡಿತ

ಜೋರಾಗುತಿರಲು

ಮನ ಎಚ್ಚರಿಸಿ ಬುದ್ಡಿ ಹೇಳಿ

ಬಿಡಿಸಿಕೊಳ್ಳ ಹೊರಟವಳಾ

ಕಿವಿಯಲ್ಲಿ ಪಿಸುರಿದ್ದ

ಹೋಗದಿರು ನಲ್ಲೇ ನನ್ನಿಂದ ದೂರ

ಪ್ರೀತಿಸಿರುವೆ ನಾನಿನ್ನ ಮನಸಿನಲೆ.

 ಮನಸಾರೆ ಮುದ್ದಿಸಿದೆ 

ಹೃದಯದಲೆ ಪೂಜಿಸಿದೆ

ಪ್ರೀತಿಸಿದೆ ,ಪ್ರೇಮಿಸಿದೆ

ಅವನಿಲ್ಲದೇ ನಾನಿಲ್ಲವಾಗಿ

ನನ್ನೇ ನಾ ಮರೆತಿರಲು

ಕಾಣದೆ ಮರೆಯಾಗಿದ್ದ
ಹೇಳದೇ ಕೇಳದೇ.

ಹುಡುಕಿದೆ

ದಮಯಂತಿ  ಮರೆಯಾದ ನಳನ ಹುಡುಕಿದಂತೆ,

ಕೂಗಿದೆ

ಗಂಟಲು ಕಿತ್ತು ಬರುವವರೆಗೆ,

ರೋಧಿಸಿದೆ

ಹೃದಯ ಬಡಿತ ನಿಲ್ಲಿಸುವಂತೆ

ಅತ್ತಿದ್ದೆ ಕಣ್ಣಲ್ಲಿ  ರಕ್ತ ಸೋರುವಂತೆ.

 
ಬೇಸರ ಗೊಂಡಿತ್ತು ಮನಸು

ಬಾರವಾಗಿತ್ತು ಹೃದಯ

ಸೂರ್ಯನ ಕಿರಣದ ಬೆಳಕು ಮೊಗವ

ತಗುಲಿ ಕನಸ ಎಚ್ಚರಿಸಿದರೂ

ಅಳುತಲೆ ಇದ್ದೇ ಮರೆಯಾದ

ರಾಜಕುಮಾರನ ನೆನಪಿನಲೆ.

Advertisements

ಜನವರಿ 3, 2009

ಅಸಾಧ್ಯ ಪ್ರಯತ್ನ

Filed under: ಅರಿಯದೇ ಬಂದದ್ದು — kavya gowda @ 11:20 ಫೂರ್ವಾಹ್ನ
Tags:

ಗಡಿಯಾರದ ಮುಳ್ಳುಗಳು
ತಿರುಗುತಿವೆ
ಚಕ್ರದಂತೆ
ಸಮಯಕ್ಕೆ ಇಲ್ಲ
ಕೊನೆಯೆಂಬ ನಿಲ್ದಾಣ.
ಪ್ರಯತ್ನಿಸುತಿರುವೆ
ಕಟ್ಟಿ ಹಾಕಬೇಕೆಂದು
 ದಿನವ
ಜಂಬದಲಿ ಅಡ್ಡ ಬರುತಿಹುದು
ನನ್ನನ್ನೇ ಅಣಕಿಸಿ ನಾಳೆ.
ಏನ ಮಾಡಿದೆ ನಿನ್ನೆ
ಏನ ಮಾಡಲಿ ನಾಳೆ
ಎನ್ನುವುದರಲೇ
ದಿನವು
ಮುಗಿದು ಬಂದು ನಿಲ್ಲುವುದು
ಮಗದೊಂದು ದಿನವು
ದಿನಕದು ನಾಳೆಯು.
ಇಂದು ಗಳಿಸುವುದು
ನಾಳೆಗಾಗಿಯಾದರೆ
ನಾಳೆಯಲಿ ಗಳಿಸುವುದು
ಅಂದಿಗಾಗಿ ಅಲ್ಲಾ
ಮಗದೊಂದು ನಾಳೆಗಾಗಿ.
ದಿನದಿನವು ಓಡುತಿರಲು
ತಿರುಗಿ ನೋಡದೇ
ನಿನ್ನೆ ಇಂದನು
ಹಗ್ಗ ಬಿಚ್ಚಿ ಹುಚ್ಚು
ಕುದುರೆಯ ಹಿಡಿಯುವಂತೆ
ಸಾಧ್ಯವಿಲ್ಲದ ಅಸಾಧ್ಯ
ಕಾಲವನು ಕಟ್ಟಿಹಾಕುವ
ನನ್ನ ಪ್ರಯತ್ನ.

ಡಿಸೆಂಬರ್ 29, 2008

ನನ್ನ ನಲ್ಲ

Filed under: ಅರಿಯದೇ ಬಂದದ್ದು — kavya gowda @ 9:58 ಫೂರ್ವಾಹ್ನ
Tags:

ನನ್ನ ನಿದ್ರೆಯೆಲ್ಲ
ಅವನಿಗೆ ಮೀಸಲೆಂಬಂತೆ
ನಾ ಕಣ್ಣು ಮುಚ್ಚಿದೊಡನೆಯೇ
ಚೋರನಂತೆ ಬಂದು
ಹಿಂದೆ ಮುಂದೆ
ಸುತ್ತ ಮುತ್ತಾ
ಬಿಡದೆ ತಿರುಗುತಿದ್ದವನಿಗೆ
ಹುಚ್ಚಿವನಿಗೆಂದು ಬೈದರೂ
ಕೇಳದವನಂತೆ ನಟಿಸುತಿದ್ದವ,
ಎದುರು ಬಂದರೆ
ಬಿಟ್ಟ ಕಣ್ಣ ಮುಚ್ಚದೆ
ಇನ್ನೇನು  ನನ್ನ
ನುಂಗಿ ಬಿಡುವಂತೆ ನೋಡಿ
ನಾನು ನಾಚಿ 
ಕರಗುವಂತೆ ಮಾಡುತಿದ್ದವ,
ಸನಿಹ ಬಂದು
ತೋಳಲಿ ನನ್ನ ಬಳಸಿ
ಹಣೆಗೆ ಮುತ್ತನಿತ್ತು 
ಮುದ್ದಿಸಿ ಪ್ರೀತಿಸುತಿದ್ದವ
ನಾ ಕಣ್ಣ ಬಿಟ್ಟವೊಡನೆ
ಬೇಸರಗೊಂಡವನಂತೆ
ಹಗಲಿನಲಿ ನೀ ನನ್ನವಳಲ್ಲ
ಮತ್ತೆ ರಾತ್ರಿ ಬರುವೆನೆಂದು
ಮರೆಯಾಗಿ ಹೋದ
ನನ್ನ  ನಲ್ಲ
ನನ್ನ ಕನಸ ರಾಜಕುಮಾರ

ಡಿಸೆಂಬರ್ 20, 2008

ಜೀವನ

Filed under: ಅರಿಯದೇ ಬಂದದ್ದು — kavya gowda @ 12:36 ಅಪರಾಹ್ನ
Tags:

ಚರ್ಮದ ಗೋಡೆಯೊಳಗೆ
ರಕ್ತದ ಸರೋವರದಲಿ
ನರ ನಾಡಿಗಳ ಬೇರಿನಲಿ
ಚಿಕ್ಕದಾದ ಮಾಂಸ
ಮುದ್ದೆಯಿಂದ
ಆಕೃತಿಯೊಂದು
ಆಕಾರಗೊಂಡು
ನವ ಮಾಸದವರೆಗೆ
ಬದುಕ ಮಾಡುತಿರಲು
ಬೆಳೆದ ಬೆಳವಣಿಗೆಗೆ
ಜಾಗ ಸಾಲದೇ
ಉಸಿರು ಕಟ್ಟುತಿರಲು
ಗಾಳಿ ಬೆಳಕುಗಳ
ಪ್ರಪಂಚಕ್ಕೆ, ನಾ
ಬಯಸದೇ ಹೊರಬಂದು
ನಿನ್ನೆ , ಇಂದು , ನಾಳೆಗಳನು
ಲೆಕ್ಕ ಹಾಕುತ್ತಾ
ಬಾಲ್ಯ , ಯೌವನ
ಮುಪ್ಪುಗಳ ಹಾದಿಯಲಿ
ಬೇಕು ಬೇಡಗಳ ನಡುವೆ
ಹೆಜ್ಜೆ ಇಡುತಿರಲು
ಬದುಕು ಸಾಕೆನಿಸಿದಾಗ
ಉಸಿರು ನಿಂತು
ಮಣ್ಣಿನಲಿ ಮರೆಯಾಗುವುದು
ನಮ್ಮದಲ್ಲದ ನಮ್ಮ ಜೀವ.

ಅಕ್ಟೋಬರ್ 14, 2008

ನನ್ನ ಹುಡುಗ

Filed under: ಅರಿಯದೇ ಬಂದದ್ದು — kavya gowda @ 9:31 ಫೂರ್ವಾಹ್ನ

ಮುಂಜಾನೆಯನೆ ಕಾಯುತಿರುವಂತೆ
ಓಡೋಡಿ ಬಂದು
ತಡವಾಗಿದ್ದರೆ  ಅಮ್ಮನಿಗೂ ಕಾಯದೇ
ಪುಸ್ತಕವ ಕೈಚೀಲದಲಿ ತುಂಬಿ
ನನ್ನ ಕೈ ಹಿಡಿದು
ಹಿಂದಿನ ದಿನ ಶಾಲೆಯಲಿ
ಕಲಿಸಿಕೊಟ್ಟ ಪಾಠವನು
ಉರು ಹೊಡೆಯುತ್ತಾ
ದಾರಿಯಲಿ ಹೋಗುವಾಗ
ನಾ ಕಲ್ಲ ಎಡವಿ ಜಾರಿ ಬಿದ್ದರೆ
ತಾನು ಅಯ್ಯೋ ಎನ್ನುತ್ತಾ
ಕಣ್ಣೀರಾ ಒರೆಸಿ ಪ್ರೀತಿಯಲಿ
ಕರೆದೊಯ್ಯುತಿದ್ದ ಜೊತೆಗಾರ
ನನ್ನ ಹುಡುಗ ,

ಗೆಳತಿಯರೊಡನೆ ಕುಂಟೆಬಿಲ್ಲೆ
ಆಡುತಿರುವಾಗ ಹಿಂದಿನಿಂದ
ಬಂದು ಜುಟ್ಟುಎಳೆದು
ಬಿಲ್ಲೆಯನು ಕದ್ದು ಇಟ್ಟು
ಕೊಡದೇ ಸತಾಯಿಸಿ
ಅಳುವಂತೆ ಮಾಡಿ ನಗುತಿದ್ದವ
ನನ್ನ ಕಣ್ಣಲಿ ಕಣ್ಣೀರಾ
ಕಂಡ ಒಡನೆ ದುಃಖ ಪಡುತಿದ್ದ
ನನ್ನ ಗೆಳೆಯ
ನನ್ನ ಹುಡುಗ ,

ಮೈನೆರೆದು ಮೂಲೆಯಲಿ
ಯಾರಿಗೂ ಮುಖ ತೋರದೇ
ನಾಚಿಕೆಯಲಿ  ಕುಳಿತೀರಲು
ಅರಿಶಿನ  ಹಚ್ಚಲು ಬಂದ
ಅಮ್ಮನ  ಸೆರಗಿನ ಹಿಂದಿನಲಿ
ಬಂದು ಯಾರಿಗೂ ಕಾಣದಂತೆ
ಚಿಗುರು ಮೀಸೆಯಡಿಯಲಿ
ನಕ್ಕೂ ಕಣ್ಣು ಹೊಡೆದು
ಓಡಿ ಹೋಗಿದ್ದ ತುಂಟ
ನನ್ನ ಹುಡುಗ,

ಗೆಳೆಯರೆಂಬ ಸಲುಗೆಯಲಿ
ಮನೆಯಲ್ಲಿ ಅನುಮಾನವಿಲ್ಲದಿರಲು
ಹುಚ್ಚುಖೊಡಿ ಮನಸ್ಸು
ಕನ್ನಡಿ ಮುಂದೋದಿಷ್ಟು
ನನ್ನ ನಾ ನೋಡಿ
ಸೀರೆ ಸೆರಗ ಸರಿ ಮಾಡುತಿರಲು
ಕನ್ನಡಿ ಒಳಗಿಂದ ನನ್ನ
ಸೌಂದರ್ಯ ಕದ್ದು ನೋಡಿ
ನನ್ನ ಮನಸ ಕೆಡಿಸಿ
ಪ್ರೀತಿಸುವಂತೆ ಮಾಡಿದ್ದ ನಲ್ಲ
ನನ್ನ ಹುಡುಗ,

ಯಾರು ಇಲ್ಲದಿರಲು
ಕಳ್ಳ ಬೆಕ್ಕಿನಂತೆ ಕದ್ದು ಬಂದು
ಅಪ್ಪಿಕೊಂಡರೆ, ಬೆದರಿ
ಕಿರು ಹೊರಟಾಗ
ತುಟಿಗೆ ತುಟಿಯನಿಟ್ಟು
ಉಸಿರುಕಟ್ಟುವಂತೆ ಮುತ್ತನಿತ್ತು
ಮನಸಿನಲಿ ಬಾವನೆಗಳ
ಅಲೆಗಳನು ಮೂಡಿಸಿದ್ದ
ನನ್ನ ಹುಡುಗ,

ನನಗೆ ತಿಳಿಯದ
ನನ್ನ ಮದುವೆಯ ಮಾತು
ಅವನ ಕಿವಿಗೆ ಬಿದ್ದವೊಡನೇ
ಬಾಲ್ಯದ ಸ್ನೇಹವ
ಮನಸ್ಸಿನ ಪ್ರೀತಿಯ
ಮೌನವಾಗಿ ಮರೆತು
ಕಣ್ಣಿಗೆ ಕಾಣದಂತೆ
ಮರೆಯಾಗಿ ಹೋಗಿದ್ದ

ನನ್ನ ಹುಡುಗ(?)….

ಜುಲೈ 21, 2008

ನಿಹಾರಿಕಾ

Filed under: ಕಥೆ — kavya gowda @ 12:04 ಅಪರಾಹ್ನ
ಪ್ರೀತಿಸಿಯೆ, ಎಲ್ಲರ ಒಪ್ಪಿಗೆ ಪಡೆದೇ ಮದುವೆಯಾಗಿದ್ದರು ಆ ದಂಪತಿಗಳು .ಆದರೆ ಇಬ್ಬರಲ್ಲೂ ಏನೂ ಕೊರತೆ. ಇಬ್ಬರೂ ಸಂತೋಷವಾಗಿರಲಿಲ್ಲ ,ಕಾರಣ ಇಬ್ಬರಿಗೂ ಹೊಂದಾಣಿಕೆ ಎನ್ನುವುದೇ ಗೊತ್ತಿರಲಿಲ್ಲ. ಚಿಕ್ಕಪುಟ್ಟದ್ದಕ್ಕೂ ಜಗಳ , ಕಿತ್ತಾಟ. ಅವ ಹೇಳಿದ್ದು ಅವಳು ಒಪ್ಪಳು ,ಅವಳು ಹೇಳಿದ್ದು ಅವನು ಕೇಳನು. ಮನೆಯಲ್ಲಿ ಯಾವಾಗಲು ಕಿರಿಕಿರಿ . ಬಡವರೇನಲ್ಲ , ಶ್ರೀಮಂತರೇ . ನೋಡುವವರಿಗೆಲ್ಲ ಇವರ ಸಂಸಾರ ಒಂದು ವಿಚಿತ್ರ ಸಂಸಾರ.ಹೀಗೆ ಒಂದೆರಡು ವರುಷಗಳ ಕಳೆದ ನಂತರ ಇವರಿಗೊಂದು ಮುದ್ದಾದ ಹೆಣ್ಣು ಮಗು .ಹೆಸರು ನಿಹಾರಿಕಾ. ಗಂಡ ಹೆಂಡತಿಯಲ್ಲಿ ಜಗಳ ಕಿತ್ತಾಟವಿದ್ದರು ಮಗಳನ್ನು ಮುದ್ದಾಗಿಯೇ ಬೆಳೆಸಿದರು.ಒಳ್ಳೆಯ  ವಿದ್ಯಾಭ್ಯಾಸವನ್ನೂ ಕೊಡಿಸಿದರು. 
ಆದರೆ  ಬೆಳೆಯುತಿದ್ದ ನಿಹಾರಿಕಳಿಗೆ  ಅಪ್ಪ ಅಮ್ಮನ ನಡವಳಿಕೆ  ಜಗಳ ಬೇಸರ ತರಿಸತೊಡಗಿತ್ತು. ದಿನ ದಿನ ಚಿಕ್ಕಪುಟ್ಟದ್ದಕ್ಕೂ ಕಿತ್ತಾಡುವುದನ್ನ ರೇಗಾಡುವುದನ್ನ ನೋಡಿ ನೋಡಿ ಸಾಕಾಗಿ ಹೋಗಿತ್ತು .ಅವರು ಎಷ್ಟೇ ಪ್ರೀತಿಯಿಂದ ನೋಡಿಕೊಂಡರು ೧೦ ನೆ  ತರಗತಿ ಮುಗಿಯುತಿದ್ದಂತೆ ಮನೆಯಲ್ಲಿರುವುದಕ್ಕೆ ಬೇಸರಗೊಂಡು ಹಾಸ್ಟೆಲ್  ಸೇರಿದ್ದಳು.ಪಾಪ ಅರಿಯದ ಹುಡುಗಿ ಹಾಸ್ಟೆಲ್ ನಲ್ಲಿ ಇದ್ದ ಹುಡುಗಿಯರ ಜೊತೆ ಸೇರಿ ಕೆಟ್ಟ ಬುದ್ದಿಗಳನ್ನೆಲ್ಲ ಕಲಿಯ ತೊಡಗಿದಳು .ಕಾಲೇಜ್ ಬೇರೆ . ಕೇಳಿದಷ್ಟು ಹಣ ಮನೆಯಲ್ಲಿ ಕೊಡುತಿದ್ದರು . ಯಾವುದಕ್ಕೂ ಕೊರತೆ ಇರಲಿಲ್ಲ  .ಚೆನ್ನಾಗಿ ಓದುತಿದ್ದ ಹುಡುಗಿ ಸಿನಿಮಾ, ಹೋಟೆಲ್ ಸುತ್ತಾಟವೆಂದು ಓದುವುದನ್ನೇ ಮರೆತಿದ್ದಳು . ಅಪ್ಪ ಅಮ್ಮ ತಮ್ಮ ಅರ್ಥವಿಲ್ಲದ ಜಗಳದಲ್ಲಿ ಇದನ್ನು ಗಮನಿಸಲೇ ಇಲ್ಲ.
ಹೀಗೇ ಮತ್ತೆರಡು ವರ್ಷಗಳು  ಕಳೆದು ಹೋಗಿದ್ದವು .
ಯಾರ ಭಯವೂ ಇಲ್ಲದೆ ಬೆಳೆಯುತಿದ್ದ ನಿಹಾರಿಕಾ ತನ್ನನ್ನು ಕೇಳುವವರು ಹೇಳುವವರು ಯಾರು ಇಲ್ಲ ,ಅಪ್ಪ ಅಮ್ಮನಿಗೆ ಅವರ ಜಗಳವೇ ಹೆಚ್ಚು ಅವರು ನನ್ನ ಬಗ್ಗೆ ಕೇಳುವುದಿಲ್ಲ  ಎಂದುಕೊಂಡವಳಿಗೆ  ಹರ್ಷ ಎನ್ನುವ ಯಾವ ಕೆಲಸಕ್ಕೂ ಬಾರದ ಹುಡುಗನೊಬ್ಬನ  ಪರಿಚಯವಾಯ್ತು . ಇವರಿಬ್ಬರ ಪರಿಚಯ ಸ್ನೇಹವಾದಾಗ  ಪಾಪ  ನಿಹಾರಿಕ ಅವನನ್ನು  ಪ್ರೀತಿಸ ತೊಡಗಿದಳು .ಅವನೂ ಪ್ರೀತಿಸಿದ್ದ  ಆದರೆ ಅವಳನ್ನಲ್ಲ  , ಬೇಕು  ಬೇಕಾದ ಹಾಗೆ ಖರ್ಚು ಮಾಡುತಿದ್ದ ಇವಳ ಹಣವನ್ನು  ಮಾತ್ರ ಪ್ರೀತಿಸಿದ್ದ .ಪಾಪ ಇದು ಆ ಹುಡುಗಿಗೆ ತಿಳಿಯದಾಗಿತ್ತು. ಇವಳ ಪ್ರೀತಿಯ ವಿಷಯ ಅಪ್ಪ ಅಮ್ಮನಿಗೆ ತಿಳಿಯಲೇ ಇಲ್ಲ . ಅವರ ಜಗಳಗಳು ಮುಗಿಯದೆ ಹಾಗೆ ಸಾಗುತಿತ್ತು .
ಹರ್ಷನೊಂದಿಗಿನ ಸುತ್ತಾಟ ಹೆಚ್ಚಾಗತೊಡಗಿತು . ನಿಹರಿಕಳ  ಓದು ನಿಂತೇ ಹೋಗಿತ್ತು .  ಜೊತೆಗಿದ್ದ ಗೆಳತಿಯರೆಲ್ಲ ದೂರಾಗಿದ್ದರು .ಹೀಗೆ  ಯಾರ ಭಯವೂ ಇಲ್ಲದೆ ಹರ್ಷ ನೊಡನೆ  ಸುತ್ತಾಡುವುದನ್ನು  ನೋಡಿದ ಯಾರೋ ಊರಿನ ಪರಿಚಯದ ಸ್ನೇಹಿತರು ಇವಳ ಸುತ್ತಾಟವನ್ನು ನೋಡಿ ಅಪ್ಪ ಅಮ್ಮನಿಗೆ ವಿಷಯವನ್ನ ತಿಳಿಸಿದ್ದರು.ವಿಷಯ ತಿಳಿದ ಅಪ್ಪ -ಅಮ್ಮ ಕೋಪಗೊಂಡರೆ ಹೊರತು ಅವರ ತಪ್ಪು ಅವರು ಅರಿಯಲೇ ಇಲ್ಲ . ಇದಾದ ಮೇಲೂ ಅವರಿಬ್ಬರ ಜಗಳ ಕಿತ್ತಾಟ ನಿಲ್ಲಲಿಲ್ಲ. ಒಬ್ಬರ ನೊಬ್ಬರು ದೂರಿಕೊಳ್ಳುವುದು ಇನ್ನೊ ಹೆಚ್ಚಾಗಿತ್ತು. ನಿಹಾರಿಕಳನ್ನು  ಹಾಸ್ಟೆಲ್ ನಿಂದ  ಬಿಡಿಸಿ ಕರೆದು ಕೊಂಡು ಬಂದು ಮನೆಯಲ್ಲಿ ಕೂಡಿ ಹಾಕಿದ್ದು ಆಯಿತು. ಪಾಪ ಮನೆಯಲ್ಲಿ ನಿಹಾರಿಕಳಿಗೆ ಹುಚ್ಚು ಹಿಡಿಯುವ ಹಾಗಾಗ ತೊಡಗಿತು .ಅಪ್ಪ ಅಮ್ಮ ಅವಳಿಗೆ ಬುದ್ಡಿ ಹೇಳುವುದ ಬಿಟ್ಟು ಈ ವಿಷಯವಾಗಿ ಜಗಳಗಳನ್ನು ಹೆಚ್ಚು ಮಾಡ ತೊಡಗಿದಾಗ ಪಾಪ ಹುಡುಗಿ ಮನೆ ಬಿಟ್ಟು ಹರ್ಷನೊಂದಿಗೆ ಹೋಗುವ ನಿರ್ಧಾರ ಮಾಡಿ  ವಿಷಯವನ್ನು ಹರ್ಷನಿಗೆ  ಹೇಳಿದಾಗ ಅವನೂ ಒಪ್ಪಿದ್ದ .
ಹರ್ಷ ಕೂಡಾ ಇದೆ  ಸಮಯಕ್ಕಾಗಿ ಕಾಯುತಿದ್ದನೆಂಬ ಸತ್ಯ  ಪಾಪ ಅವಳಿಗೆ ಹೊಳೆಯಲೇ ಇಲ್ಲ . ಇದೆ ಸಮಯಕ್ಕಾಗಿ  ಕಾದಿದ್ದ ಹರ್ಷ ನಿಹಾರಿಕಳ ಮನವೊಲಿಸಿ ಮನೆಯಿಂದ ಹಣ ಒಡವೆಗಳನೆಲ್ಲ ತೆಗೆದುಕೊಂಡು ಬರುವಂತೆ  ಹೇಳಿದ. ಹುಚ್ಚು ಹುಡುಗಿ , ಮನೆಯಿಂದ ದೂರಾಗುವ ಯೋಚನೆಯಲ್ಲಿ ತನ್ನ ಕೈಗೆ ಸಿಕ್ಕ ಒಡವೆ ಹಣ ಎಲ್ಲ ತೆಗೆದುಕೊಂಡು ಮುಂದಿನ ಅನಾಹುತಗಳನ್ನು ಯೋಚಿಸದೇ ಅವನೊಂದಿಗೆ ಮನೆ ಬಿಟ್ಟು ಓಡಿ ಬಂದಿದ್ದಳು.ಅಪ್ಪ ಅಮ್ಮನನ್ನು  ತೊರೆದಿದ್ದಳು .
ನಿಹಾರಿಕಳ   ತಂದೆ ತಾಯಿಗೆ  ಏನಾಯ್ತು  ಎಂದು  ತಿಲಿಯುವುದರವೊಳಗೆ  ನಿಹಾರಿಕ ಅವರಿಂದ , ಅವರ ಮನೆಯಿಂದ ದೂರ ಹೋಗಿದ್ದಳು .ಎಲ್ಲ ಕಡೆ  ಹುಡುಕಿದರೂ ಹುಡುಕಿಸಿದರೂ  ನಿಹಾರಿಕ ಸಿಗದಾಗಿದ್ದಳು . ಕೊನೆಗೆ ಏನು ಮಾಡುವುದೆಂದು ತಿಳಿಯದ ಅಪ್ಪ ಅಮ್ಮ ಪೋಲಿಸ್ ನವರಿಗೂ ದೂರನ್ನು ಕೊಟ್ಟಿದ್ದರು.ಪೋಲಿಸ್ ನವರು ಅವರ ಕೆಲಸ ಅವರು ಮಾಡುತಿದ್ದರು .  ಪಾಪ ಅಪ್ಪ ಅಮ್ಮನಿಗೆ ತಮ್ಮ ತಪ್ಪಿನ ಅರಿವಾಗಿತ್ತು . ನಿಹಾರಿಕಳ ಈ ತಪ್ಪು ನಿರ್ದಾರಕ್ಕೆ ತಾವೇ ಕಾರಣ ಎನ್ನುವ ಸತ್ಯ ಇಬ್ಬರಿಗೂ ತಿಳಿದಿತ್ತು . ತಮ್ಮ ತಪ್ಪಿನ ಅರಿವಾಗಿ ತಪ್ಪನ್ನು ತಿದ್ದಿಕೊಂಡು ಒಬ್ಬರ  ದುಃಖಕ್ಕೆ  ಒಬ್ಬರಾದರೆ   ಪಾಪ  ಏನೂ  ಅರಿಯದೇ ತಪ್ಪು ಮಾಡಿದ ನಿಹಾರಿಕಾ ,
ಅವಳು ಮಾಡಿದ್ದೂ ತಪ್ಪು ಎಂದು ಅರಿವಾಗುವಷ್ಟರಲ್ಲಿ ಹರ್ಷ ಅವಳಿಗೆ ಮೋಸ  ಮಾಡಿ ಅವಳನ್ನು ಬಿಟ್ಟು ಹೋಗಿದ್ದ. ಪ್ರಾಣ ಕಿಂತ  ಹೆಚ್ಚಾಗಿ ಪ್ರೀತಿಸಿದ  ಹರ್ಷ ಮೋಸ , ಚಿಕ್ಕ ವಯಸ್ಸಿನ ಅವಳು ಒಂಟಿಯಾಗಿ ಜೀವನ ನಡೆಸಲಾಗದ ಅಸಹಾಯಕತೆ , ಮನೆಯ ಪರಿಸ್ಥಿತಿ  ಇವೆಲ್ಲವನ್ನೂ ಯೋಚಿಸಿದ ನಿಹಾರಿಕ  ತಂದೆ ತಾಯಿಗೆ ಮುಖವನ್ನು ತೋರಿಸುವ ಮನಸಿಲ್ಲದೇ ಆತ್ಮಹತ್ಯೆ ಮಾಡಿಕೊಂಡು ಅನಂತದೆಡೆಗೆ  ಪ್ರಯಾಣ ಬೆಳೆಸಿ ನಿಹಾರಿಕೆಯಾದಳು .

ಜುಲೈ 17, 2008

ಕನಸು

Filed under: ಅರಿಯದೇ ಬಂದದ್ದು — kavya gowda @ 9:08 ಫೂರ್ವಾಹ್ನ
Tags:
————-
ಚಿಂತೆಯಲ್ಲಿರುವ ಜೀವಕ್ಕೆ
ಚಿಂತೆಗಳ ಹೆಚ್ಚಿಸಿ
ಪ್ರೀತಿಸುವವರ ಪ್ರೀತಿಯನು
ಅವರಿಗರಿಯದೆ ನೋಯಿಸಿ
ದಣಿದ ಜೀವಗಳು
ಬೆಚ್ಚಿ ಹೆದರುವಂತೆ ಮಾಡಿ
ನಮಗರಿಯದೆ ನಮ್ಮ ನಗಿಸಿ
ಅಳುವಂತೆ ಮಾಡಿ ಹಿಂಸಿಸಿ
ಏನಾಯ್ತೆಂದು ಅರಿಯುವುದರೊಳಗೆ 
ಮಿಂಚಿನಂತೆ ಮರೆಯಾಗಿ 
ಯೋಚಿಸುವಂತೆ ಮಾಡಿ 
ಏನನೋ  ಗೆದ್ದ  ಹೆಮ್ಮೆಯಲಿ
ತಾನು ಸಂತಸವಾಗಿ
ನಾಳೆ ಮತ್ತೆ ಬರುವೆ ಎನ್ನುವವಳು .
———————  

ಜುಲೈ 16, 2008

ತಪ್ಪು

Filed under: ಅರಿಯದೇ ಬಂದದ್ದು — kavya gowda @ 12:00 ಅಪರಾಹ್ನ
ನಿನ್ನ ನೋಟದ ಅರ್ಥ
ಅರಿವಾದರೂ
ನಿನ್ನ ಬಾಹುಬಂದನದಲ್ಲಿ
ಬಂಧಿಯಾಗಿದ್ದು .

ಜುಲೈ 15, 2008

ವಿಪರ್ಯಾಸ

Filed under: ಅರಿಯದೇ ಬಂದದ್ದು — kavya gowda @ 12:53 ಅಪರಾಹ್ನ

ನಾ ಬಚ್ಚಿ-ಇಟ್ಟೆ 
ಮನಸ ಬಾವನೆಗಳ
ತಿಳಿದು ನೀ ನನ್ನಿಂದ
ದೂರಾಗಬಹುದೆಂದು.
ವಿಪರ್ಯಾಸವೆಂದರೆ,
ನಾ ಅರಿಯದೇ ಹೋದದ್ದು
ನೀ ದೂರವಾಗಲು 
ನಾ ಬಚ್ಚಿ –ಇಟ್ಟ ಮನದ
ಬಾವನೆಗಳೆ
ಕಾರಣವಾಗುವುದೆಂದು.

ಜುಲೈ 14, 2008

ನಮ್ಮ ಬದುಕು ನಮ್ಮದೇ

Filed under: ಅರಿಯದೇ ಬಂದದ್ದು — kavya gowda @ 8:28 ಫೂರ್ವಾಹ್ನ

ಯಾರೂ ಯಾರಿಗಿಲ್ಲ

ಯಾರಿಗೆ ಯಾರೂ ಇಲ್ಲ

ಅವರು ನಿನ್ನವರಲ್ಲ,

ನೀನು ಅವರವನಲ್ಲ

ನಿನ್ನ ಬದುಕು ನಿನ್ನದೇ .

ಹೆತ್ತವರು ಹೆತ್ತರೂ

ಅವರು ನಿನ್ನವರಲ್ಲ

ಅವರಿರುವುದು ನೀ

ಜೀವನ ಕಲಿಯುವವರೆಗೆ !

ನಿನ್ನ ಜೀವನ  ನೀ

ನಡೆಸುವುದ ಕಲಿತ ಮೇಲೆ

ಅವರು ನಿನ್ನವರಲ್ಲ,ನೀ ಅವರವನಲ್ಲ

ನಿನ್ನ ಬದುಕು ನಿನ್ನದೇ.

ಅಕ್ಕ ತಮ್ಮ ,   ಅಣ್ಣತಂಗಿ 

ಗಂಡ ಹೆಂಡತೀ ಮಕ್ಕಳು

ಬಂದುಬಳಗ ನಿನ್ನವರಲ್ಲ

ಅವರಿರುವುದು ಅವರ ಅನಿವಾರ್ಯ,

ಅವಶ್ಯಕತೆ  ಈಡೇರುವ ವರೆಗೆ !

ಜೀವನ ಕಲಿತ ಮೇಲೆ

ನಿನ್ನ ಅವಶ್ಯಕತೆ ಇಲ್ಲವಾದರೆ

ಅವರು ನಿನ್ನವರಲ್ಲ, ನೀನು ಅವರವನಲ್ಲ

ನಿನ್ನ ಬದುಕು ನಿನ್ನದೇ .

ನೀ ಪ್ರೀತಿಸಿದವರೂ ನಿನ್ನವರಲ್ಲ

ನಿನ್ನ ಸ್ನೇಹಿತರೂ ನಿನ್ನವರಲ್ಲ

ಅವರಿರುವರು ಅವರ

ಪ್ರೀತಿ ಸಿಗುವವರೆಗೆ

ನೀ ಸುಖದಿ ಇರುವವರೆಗೆ!

ನಿನಗೆ ಸುಖವಿಲ್ಲದಾದಾಗ

ಅವರ ಪ್ರೀತಿ ಸಿಕ್ಕಾಗ

ಅವರು ನಿನ್ನವರಲ್ಲ,ನೀ ಅವರವನಲ್ಲ

ನಿನ್ನ ಬದುಕು ನಿನ್ನದೇ .

ಯಾರೂ ಯಾರಿಗಿಲ್ಲ

ಯಾರೂ ಯಾರವರಲ್ಲ

ಬದುಕು ನಮ್ಮದೇ…

  ಬದುಕು ನಮ್ಮದೇ ,

ಸಾವು ಬಳಿ ಬರುವವರೆಗೆ!!.

« ಹಿಂದಿನ ಪುಟಮುಂದಿನ ಪುಟ »

Blog at WordPress.com.